ಬ್ರ್ಯಾಂಡ್ ಬಗ್ಗೆ ಕಲ್ಪನೆ ಇಲ್ಲದೆ ಹೋರಾಟದ ಮೂಲಕವೇ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ನಾಯಕ ಬಿ.ಎಸ್.ಯಡಿಯೂರಪ್ಪ

ಒಟ್ಟು ವೀಕ್ಷಣೆಗಳು : 491
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಮಲ್ಲಿಕಾರ್ಜುನ ಬಿ. ಕರೆರುದ್ರನ್ನವರ ಬೆಳಗಾವಿ.

ರಾಜ್ಯ ಕಂಡ ದುರಂತ ನಾಯಕರುಗಳಲ್ಲಿ ಬಿ.ಎಸ್.ವೈ ಒಬ್ಬರು. ಬ್ರ್ಯಾಂಡ್ ಬಗ್ಗೆ ಯಾವುದೇ ಕಲ್ಪನೆ, ಗಮನಗಳಿಲ್ಲದೇ ತಮ್ಮ ಹೋರಾಟದ ಮೂಲಕವೇ ಬ್ರ್ಯಾಂಡ್ ಆಗಿ ಹೊರಹೊಮ್ಮಿದವರು. ಪಕ್ಕದ ರಾಜ್ಯದ ಜಯಲಲಿತಾ ಆರೋಪಗಳ ಮಾಲೆಯನ್ನೇ ಹೊದ್ದಿದ್ದರೂ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ರಾರಾಜಿಸುತ್ತಿದ್ದರು. ಆದರೆ ಯಡಿಯೂರಪ್ಪ ಎಂಬ ನಾಯಕನ ವಿಷಯದಲ್ಲಿ ಮಾತ್ರ ಹಾಗಾಗಲಿಲ್ಲ. ಒಂದು ಕಾಲದಲ್ಲಿ ರಾಜಕೀಯದಲ್ಲಿ  ರಾಜನಾಗಿ ಮೆರೆದವರು ಈಗ ಏನೂ ಅಲ್ಲದವರು ರಾಜಕೀಯದಲ್ಲಿ ಬಹಳಷ್ಟು ಮಂದಿಯಿದ್ದಾರೆ. ಈ  ಪರಿಸ್ಥಿತಿಗೆ ಪ್ರಸ್ತುತ ರಾಜಕಾರಣದಲ್ಲಿ ಉತ್ತಮ ಉದಾಹರಣೆಯೆಂದರೆ ಬಿ.ಎಸ್.ಯಡಿಯೂರಪ್ಪ. ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಹಠ, ಛಲಕ್ಕೆ ಬಿದ್ದರೆ ಮುಗಿದುಹೋಯಿತು. ವಿರೋಧಿಗಳ ಜನ್ಮ ಜಾಲಾಡದೇ ಬಿಡೋರಲ್ಲ. ಜಾತಿ ಮಾತ್ರವಲ್ಲ, ಪಕ್ಷ ಮಟ್ಟದಲ್ಲೂ ಅವರದ್ದು ಎತ್ತರದ ನಾಯಕತ್ವ. ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಛಲಗಾರ. ಕಾವೇರಿ ವಿಚಾರ ಬಂದಾಗ ತನ್ನ ಪಕ್ಷಕ್ಕೆ ಸೀಟ್ ಬರುತ್ತೋ ಇಲ್ಲವೋ ಎಂಬುದನ್ನೂ ಲೆಕ್ಕಿಸದೇ ತಲಕಾವೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಹುಟ್ಟು ಹೋರಾಟಗಾರ. ತನ್ನ ಹರಿತವಾದ ಮಾತುಗಳಿಂದ ಆಡಳಿತ ಪಕ್ಷಗಳನ್ನು ತಿವಿದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೊಸ ಭಾಷ್ಯ ಬರೆದ ವಾಗ್ಮಿ ಹಾಗೂ ಸಂಸದೀಯ ಪಟು. ಕರ್ನಾಟಕದಲ್ಲಿ ಬಿಜೆಪಿ ಏನೂ ಅಲ್ಲದಿದ್ದಾಗ ಪಕ್ಷವನ್ನು ಅಧಿಕಾರಕ್ಕೇರುವಂತೆ ಮಾಡಿದವರು ಯಡಿಯೂರಪ್ಪ. ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಕಟ್ಟಿ ಪುನಃ ಮಾತೃ ಪಕ್ಷದ ಮಡಿಲಿಗೆ ವಾಪಸಾಗಿದ್ದು ಈಗ ಇತಿಹಾಸ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಜ್ಯದ ಪ್ರಾದೇಶಿಕ ಪಕ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಮತಪ್ರಮಾಣ ಗಳಿಸಿದ ಯಶಸ್ಸು ಕೆಜೆಪಿ ಹಾಗೂ ಯಡಿಯೂರಪ್ಪನವರ ವರ್ಚಸ್ಸಿಗೆ ಹಿಡಿದ ಕೈಗನ್ನಡಿ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಗುಂಪುಗಾರಿಕೆ, ಅಧಿಕಾರದಿಂದ ಕೆಳಗಿಳಿದ ಮೇಲೆ ಜೈಲುವಾಸ, ರಾಜ್ಯದಲ್ಲಿ ರಾಜಕೀಯ ಅರಾಜಕತೆಗೆ ಕಾರಣವಾಗಿದ್ದು ಇಂತಹ ಹಲವು ಗುರುತರ ಆಪಾದನೆಗಳಿದ್ದರೂ ಜನ ಕೆಜೆಪಿ ಕಡೆ ತಕ್ಕಮಟ್ಟಿಗೆ ಅಂದು ಆಕರ್ಷಿತರಾಗಿದ್ದಂತೂ ಸತ್ಯ. ಇದಕ್ಕೆ ಕಾರಣವಾಗಿದ್ದು ಯಡಿಯೂರಪ್ಪನವರ ಹೋರಾಟದ ಮನೋಭಾವನೆ, ಕಾರ್ಯಕ್ರಮಗಳು ಹಾಗೂ ಲಿಂಗಾಯತ ಸಮೂಹದ ಬೆಂಬಲ. ಇದೇ ಕಾರಣದಿಂದ ಯಡಿಯೂರಪ್ಪನವರ ಹೆಸರು ಸದಾ ಚಾಲ್ತಿಯಲ್ಲಿರುವುದು. ವಿರೋಧಿಗಳ ಪಾಲಿಗೆ ಅಂದು ಬಿ. ಎಸ್. ಯಡಿಯೂರಪ್ಪ ಕಳೆಗುಂದಿದಂತೆ ಕಂಡಿದ್ದರು ಈಗ ಫೀನಿಕ್ಸ್ ನಂತೆ ಮೇಲೆದ್ದು ಬಂದಿದ್ದಾರೆ. ಪ್ರಬಲ ಲಿಂಗಾಯಿತ ಕೋಮಿನ ಪ್ರಶ್ನಾತೀತ ನಾಯಕ ಅನ್ನುವುದು ಪ್ಲಸ್ ಪಾಯಿಂಟ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರ ನಂತರ ದೊಡ್ದ ಮಟ್ಟದ ಛಾತಿಯನ್ನು ಪಡೆದ ಏಕೈಕ  ನಾಯಕ ಬಿಎಸ್ವೈ. ದಕ್ಷಿಣ ಭಾರತದ ಮೋದಿಯಾಗಿ ಮೆರೆಯಬೇಕಾಗಿದ್ದ ಯಡಿಯೂರಪ್ಪನವರು, ರಾಜಕೀಯ ವಿರೋಧಿಗಳು ತೋಡಿದ ಹಳ್ಳಕ್ಕೆ ಬಿದ್ದ ಪರಿಯಂತೂ ವಿಪರ್ಯಾಸ. ಬಿಎಸ್​ವೈ ಮೊದಲ ಬಾರಿ ಮುಖ್ಯಮಂತ್ರಿಯಾಗಿ 6 ದಿನ, 2ನೇ ಬಾರಿ 38 ತಿಂಗಳು, 3ನೇ ಬಾರಿ 56 ಗಂಟೆ ಮುಖ್ಯಮಂತ್ರಿ ಪದವಿಯಲ್ಲಿದ್ದರು ಈಗ ಮತ್ತೊಮ್ಮೆ ಕರ್ನಾಟಕ ರಾಜ್ಯದ 31ನೇ ಮುಖ್ಯಮಂತ್ರಿಗಳಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಒಳ್ಳೆಯ ಆಡಳಿತ ನೀಡುತ್ತಾರೆಂಬ ವಿಶ್ವಾಸ ರಾಜ್ಯದ ಜನರಿಗಿದೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು